ಬ್ರಹ್ಮ ಎಂದರೆ ವೇದ. ಅದರ ಅರ್ಥವನ್ನು ನಿರ್ಣಯಿಸುವ ಸೂತ್ರಗಳೇ ಬ್ರಹ್ಮಸೂತ್ರಗಳು. ಬ್ರಹ್ಮ ಎಂದರೆ ಪರಬ್ರಹ್ಮ, ವಿಷ್ಣು. ಅವನ ಸ್ವರೂಪವನ್ನು ನಿರ್ಣಯಿಸುವ ಸೂತ್ರಗಳೇ ಬ್ರಹ್ಮಸೂತ್ರಗಳು. ಶ್ರೀಮಜ್ಜಯತೀರ್ಥರೇ ತಮ್ಮ ಶ್ರೀಮನ್ನಾಯಸುಧಾದಲ್ಲಿ ಈ ಅರ್ಥವನ್ನು ಹೇಳಿದ್ದಾರೆ - 'ಬ್ರಹ್ಮ ವೇದಃ ತದರ್ಥಃ ಪರಬ್ರಹ್ಮ ವಾ | ತಸ್ಯ ಸೂತ್ರಾಣಿ ಬ್ರಹ್ಮಸೂತ್ರಾಣಿ | ಸಕಲವೇದಾರ್ಥಭೂತಸ್ಯ ಪರಬ್ರಹ್ಮಣೋ ವಿಷ್ಟೋಃ ಸ್ವರೂಪನಿರ್ಣಯಾರ್ಥಾನಿ ಸೂತ್ರಾಣೀತಿ ಯಾವತ್ '

ಬ್ರಹ್ಮ ಎಂದರೆ ಜ್ಞಾನಪರಿಪೂರ್ಣರಾದ ಶ್ರೀವ್ಯಾಸರು. ತತ್ಪಣೀತ ಸೂತ್ರಗಳಾದ್ದರಿಂದ ಬ್ರಹ್ಮಸೂತ್ರಗಳೆಂಬ ಅರ್ಥವನ್ನೂ ಇಟ್ಟುಕೊಳ್ಳಬಹುದು. ಸೂತ್ರವೆಂದರೆ

ಅಲ್ಪಾಕ್ಷರಮಸಂದಿಗ್ಧಂ ಸಾರವದ್ವಿಶ್ವತೋಮುಖಮ್ |

ಅಸ್ತೋಭಮನವದ್ಯಂ ಚ ಸೂತ್ರಂ ಸೂತ್ರವಿದೋ ವಿದುಃ ॥

ಅಲ್ಪಾಕ್ಷರತ್ವ - ಎಷ್ಟು ಅಕ್ಷರಗಳಿಲ್ಲದಿದ್ದರೆ ವಿವಕ್ಷಿತಾರ್ಥವು ತಿಳಿಯುವುದಿಲ್ಲವೋ ಅಷ್ಟಕ್ಕಿಂತ ಅಧಿಕಾಕ್ಷರಗಳು ಇರಕೂಡದು.

ಅಸಂದಿಗ್ಧಮ್ - ಸಂದೇಹಕ್ಕೆ ಆಸ್ಪದವಿಲ್ಲದಂತೆ ವಿಷಯವನ್ನು ನಿರೂಪಿಸಬೇಕು.
ಸಾರವತ್ ಇತರ ಶಾಸ್ತ್ರಗಳಿಂದ ಲಭ್ಯವಾಗದ ಉತ್ತಮ ವಿಷಯವನ್ನು ಪ್ರತಿಪಾದಿಸಬೇಕು.

ವಿಶ್ವತೋಮುಖಮ್ – ವೇದಗಳಲ್ಲಿರುವ ಅನೇಕ ಶಾಖಾನಿರ್ಣಯಕವಾಗಿರಬೇಕು.

ಅಸ್ತೋಭಮ್ – ಪ್ರಕೃತಕ್ಕೆ ಅನುಪಯುಕ್ತವಾದ, ಆದರೂ, ಸಾಮವೇದದಲ್ಲಿ ಬಳಸುವಂತಹ ಸ್ತೋಭಾಕ್ಷದಂತಹ ಅಕ್ಷರಗಳು ಇರಕೂಡದು.

ಅನವದ್ಯಮ್ – ಅಪಶಬ್ದಗಳಿರಕೂಡದು.

ಇಂಥವನ್ನು ಮಾತ್ರ ಸೂತ್ರಗಳೆಂದು ಕರೆಯುವರು.

ಬ್ರಹ್ಮಸೂತ್ರಗಳೇ ಮುಖ್ಯಸೂತ್ರಗಳು. ಏಕೆಂದರೆ ಅನನ್ಯಲಭ್ಯವಾದ ಅತ್ಯುತ್ತಮ ವಿಷಯನಾದ ಬ್ರಹ್ಮನನ್ನು ಇವು ಪ್ರತಿಪಾದಿಸುತ್ತವೆ. ಮತ್ತು ವೇದಗಳು ಅನಂತ. 'ಅನಂತಾ ವೈ ವೇದಾಃ', ಬ್ರಹ್ಮಸೂತ್ರಗಳು ಮಾತ್ರ ಕೇವಲ 564. ಹೀಗಿರುವಾಗ ಈ ಕೆಲವೇ ಸೂತ್ರಗಳು ಅನಂತ ವೇದಗಳ ಅರ್ಥಕ್ಕೆ ಹೇಗೆ ನಿರ್ಣಯಕವಾಗಬಲ್ಲವು? ಎಂದು ಸಂಶಯ ಪಡೆಯಬೇಕಾಗಿಲ್ಲ.ಅನಂತ ವೇದಗಳನ್ನು ಬ್ರಹ್ಮದೇವರಿಗೆ ಉಪದೇಶಿಸುತ್ತಿರುವ ವೇದವ್ಯಾಸರೇ 'ಓಂ ಗತಿಸಾಮಾನ್ಯಾತ್ ಓಂ' ಎಂದಿದ್ದಾರೆ. ಈ ಬ್ರಹ್ಮಸೂತ್ರಗಳಲ್ಲಿ ನಿರ್ಣಯಿಸಲ್ಪಟ್ಟ ಪ್ರಮೇಯಕ್ಕೆ ವಿರುದ್ಧವಾಗಿ ಅನಂತ ವೇದಗಳಲ್ಲಿ ಅಂತರ್ಗತವಾದ ಯಾವ ವಾಕ್ಯವೂ ಹೇಳುತ್ತಿಲ್ಲ ಎಂಬುದನ್ನು ಖಚಿತವಾಗಿ ಹೇಳಿದ್ದಾರೆ. 'ಸರ್ವೆ ವೇದಾ ಯುಕ್ತಯಃ ಸುಪ್ರಮಾಣಾಃ ಬ್ರಾಹ್ಮಂ
ಜ್ಞಾನಂ ಪರಮಂ ಶ್ವೇಕಮೇವ | ಪ್ರಕಾಶಯಂತೇ ನ ವಿರೋಧಃ ಕುತಶ್ಚಿತ್ ವೇದೇಷು ಸರ್ವೆಷು ತಥೇತಿಹಾಸೇ ॥' ಎಂಬ ಶ್ರುತಿವಾಕ್ಯವೂ ಇದನ್ನೇ ಹೇಳುತ್ತದೆ. ಆದ್ದರಿಂದಲೂ ಈ ಸೂತ್ರಗಳಲ್ಲಿಯೇ ಮುಖ್ಯವಾಗಿ ವಿಶ್ವತೋಮುಖತ್ವ ಇರುವ ಪ್ರಯುಕ್ತ ಇವುಗಳೇ ಮುಖ್ಯವಾಗಿ ಸೂತ್ರಗಳಾಗಿವೆ. ಉಳಿದೆಲ್ಲ ಸೂತ್ರಗಳೂ ಔಪಚಾರಿಕವಾಗಿ ಸೂತ್ರಗಳಾಗಿವೆ. ಆದ್ದರಿಂದ ಯಾವ ವಿಶೇಷಣವನ್ನೂ ಕೊಡದೇ ಕೇವಲ 'ಸೂತ್ರ' ಪದವನ್ನು ಪ್ರಯೋಗಿಸಿದರೆ ಅದು ಬ್ರಹ್ಮಸೂತ್ರವನ್ನೇ ತಿಳಿಸುತ್ತದೆ.

*ನಿರ್ವಿಶೇಷಿತಸೂತ್ರತ್ವಂ ಬ್ರಹ್ಮಸೂತ್ರಸ್ಯ ಚಾಪ್ಯತಃ'.
ಪ್ರತಿಯೊಂದು ಸೂತ್ರವೂ ಶ್ರುತ್ಯರ್ಥನಿರ್ಣಾಯಕನ್ಯಾಯ(ಯುಕ್ತಿ) ಸೂಚಕವಾದ ಪ್ರಯುಕ್ತ ಈ ಸೂತ್ರಗಳನ್ನು ಬ್ರಹ್ಮಮೀಮಾಂಸಾ ಎಂದೂ ಕರೆಯುತ್ತಾರೆ. ಇವುಗಳಿಗೇ ಶಾರೀರಕಮೀಮಾಂಸಾ ಎಂಬ ಮತ್ತೊಂದು ಹೆಸರೂ ಇದೆ. ಶಾರೀರಕ ಎಂದರೆ ವಿಷ್ಣು. 'ಶಾರೀರೌ ತಾವುಭೌ ಪ್ಲೇಯೌ ಜೀವಶ್ವೇಶ್ವರಸಂಜ್ಜಿತಃ | ಅನಾದಿಬಂಧನಸ್ಸೇಕೋ ನಿತ್ಯಮುಕ್ತಸ್ತಥಾಪರಃ'
(ಜೀವ ಮತ್ತು ಈಶ್ವರ ಇಬ್ಬರೂ ಶಾರೀರರೆನಿಸಿದ್ದಾರೆ. ಅವರಲ್ಲಿ ಜೀವನು ಅನಾದಿಬಂಧನ ಉಳ್ಳವನು. ಈಶ್ವರನು ನಿತ್ಯಮುಕ್ತನು) ಎಂದು ಭಗವದ್ಗೀತಾ ಸಪ್ತಮಾಧ್ಯಾಯದ ಭಾಷ್ಯದಲ್ಲಿ ಉದಾಹರಿಸಲಾಗಿದೆ. ಜೀವರ ಶರೀರದಲ್ಲಿ ನಿಯಾಮಕ-ನಾಗಿರುವುದರಿಂದ ವಿಷ್ಣುವು ಶಾರೀರ. 'ಶಾರೀರ ಏವ ಶಾರೀರಕಃ' ಎಂಬ ವ್ಯುತ್ಪತ್ತಿಯಿಂದ ಶಾರೀರನಾದ ವಿಷ್ಣುವೇ ಶಾರೀರಕ. ಅಥವಾ ಶಾರೀರನಾದ ಜೀವನಿಗೆ ಕ = ಸುಖವನ್ನು ಕೊಡುವುದರಿಂದ ಶಾರೀರಿಕ ವಿಷ್ಣು. ವಿಷ್ಣು. ಆದ್ದರಿಂದ ಶಾರೀರಕಮೀಮಾಂಸೆ ಎಂದರೂ ಬ್ರಹ್ಮಮೀಮಾಂಸಾ ಎಂದೇ ಅರ್ಥ.